ಸೋಮವಾರ, ಜುಲೈ 6, 2009

ಸತ್ಯ ಸಂದೇಶ

http://www.satyasandesha.com/

ಇಸ್ಲಾಮೀ ವಿಶ್ವಾಸ ಕಾರ್ಯಗಳು ಕುರ್ಆನ್ ಸುನ್ನತ್ ನ ಬೆಳಕಿನಲ್ಲಿ

ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್‌ಉಸೈಮೀನ್


ಬುನಾದಿ


ಇಸ್ಲಾಮೀ ವಿಶ್ವಾಸದ ಬುನಾದಿಯ ಕುರಿತು ಹೇಳುವುದಾದರೆ ಅದು ಅಲ್ಲಾಹನಲ್ಲಿ, ಅವನ ಮಲಕ್(angel)ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅಂತ್ಯದಿನದಲ್ಲಿ ಮತ್ತು ದೈವಿಕ ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ- ವಿಶ್ವಾಸವಿಡುವುದಾಗಿದೆ. ಈ ಬುನಾದಿಗಿರುವ ಪುರಾವೆಗಳನ್ನು ಅಲ್ಲಾಹನ ಗ್ರಂಥವಾದ ಕುರ್‌ಆನ್‌ನಲ್ಲಿ ಮತ್ತು ಅವನ ಸಂದೇಶವಾಹಕರಾದ ಮುಹಮ್ಮದ್(ಸ)ರವರ ಚರ್ಯೆಯಾದ ಸುನ್ನತ್‌ನಲ್ಲಿ ವಿವರಿಸಲಾಗಿದೆ. ಅಲ್ಲಾಹನು ತನ್ನ ಗ್ರಂಥದಲ್ಲಿ ಹೇಳಿದ್ದಾನೆ:


"ನೀವು ನಿಮ್ಮ ಮುಖಗಳನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ತಿರುಗಿಸುವುದಲ್ಲ ಧರ್ಮ ಶೀಲತೆ. ಆದರೆ (ವಾಸ್ತವಿಕವಾಗಿ) ಯಾರು ಅಲ್ಲಾಹನಲ್ಲಿ, ಅಂತ್ಯದಿನದಲ್ಲಿ, ಮಲಕ್‌ಗಳಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಡುತ್ತಾನೋ ಅವನಾಗಿದ್ದಾನೆ ಧರ್ಮಶೀಲತೆಯಿರುವವನು." (ಕುರ್‌ಆನ್ 2:177)


ವಿಧಿವಿಶ್ವಾಸದ ಕುರಿತು ಅಲ್ಲಾಹನು ಹೇಳಿದ್ದಾನೆ:


"ಪೂರ್ವ ನಿರ್ಧರಿತ ವಿಧಿಯ ಪ್ರಕಾರ ನಾವು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿದೆವು. ಮತ್ತು ನಮ್ಮ ಆಜ್ಞೆಯು ಕಣ್ಣು ಮಿಟುಕಿಸಿದಂತೆ ಕೇವಲ ಒಂದು ಮಾತ್ರವೇ ಆಗಿದೆ." (54:49-50)


ಜಿಬ್ರೀಲ್ (Gabriel) ಎಂಬ ಮಲಕ್ ಪ್ರವಾದಿ(ಸ)ರವರೊಂದಿಗೆ ವಿಶ್ವಾಸದ ಕುರಿತು ಪ್ರಶ್ನಿಸಿದಾಗ ಪ್ರವಾದಿ(ಸ)ರವರು ಹೇಳಿದರು:
ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅಂತ್ಯದಿನದಲ್ಲಿ ವಿಶ್ವಾಸವಿಡುವುದಾಗಿದೆ. ಮತ್ತು ವಿಧಿಯಲ್ಲಿ -ಅದರ ಒಳಿತು ಮತ್ತು ಕೆಡುಕು ಗಳಲ್ಲಿ- ವಿಶ್ವಾಸವಿಡುವುದಾಗಿದೆ. (ಸಹೀಹ್ ಮುಸ್ಲಿಮ್ ಹದೀಸ್ ನಂ. 8)


ಅಲ್ಲಾಹನಲ್ಲಿ ವಿಶ್ವಾಸವಿಡುವುದು


ನಾವು ಅಲ್ಲಾಹನ ಪ್ರಭುತ್ವದಲ್ಲಿ (ರುಬೂಬಿಯ್ಯತ್) ವಿಶ್ವಾಸವಿಡಬೇಕು. ಅರ್ಥಾತ್ ನಮ್ಮ ಪ್ರಭು, ಸೃಷ್ಟಿಕರ್ತ, ಪರಮಾ ಧಿಕಾರವಿರುವ ಯಜಮಾನ ಮತ್ತು ನಿಯಂತ್ರಕ ಕೇವಲ ಅಲ್ಲಾಹನು ಮಾತ್ರವಾಗಿದ್ದಾನೆ ವಿಶ್ವಾಸವಿಡಬೇಕು.


ನಾವು ಅಲ್ಲಾಹನ ದೈವಿಕತೆ ಮತ್ತು ಆರಾಧನಾರ್ಹತೆಯಲ್ಲಿ (ಉಲೂಹಿಯ್ಯತ್) ವಿಶ್ವಾಸವಿಡಬೇಕು. ಅರ್ಥಾತ್ ನಮ್ಮೆಲ್ಲಾ ಆರಾಧನೆಗಳಿಗೆ ಅರ್ಹನಾಗಿರುವವನು ಕೇವಲ ಅಲ್ಲಾಹನು ಮಾತ್ರವೇ ಆಗಿದ್ದಾನೆ. ಅವನ ಹೊರತು ಆರಾಧಿಸಲ್ಪಡುವ ವ್ಯಕ್ತಿ ಶಕ್ತಿಗಳೆಲ್ಲವೂ ಬರೀ ಮಿಥ್ಯಗಳಾಗಿವೆ ಎಂದು ವಿಶ್ವಾಸವಿಡಬೇಕು.


ನಾವು ಅಲ್ಲಾಹನ ನಾಮ ಮತ್ತು ವಿಶೇಷಣಗಳಲ್ಲಿ (ಅಲ್‌ಅಸ್ಮಾಉ ವಸ್ಸಿಫಾತ್) ವಿಶ್ವಾಸವಿಡಬೇಕು. ಅರ್ಥಾತ್ ಸುಂದರವಾದ ಮತ್ತು ಅತ್ಯುನ್ನತವಾದ ನಾಮಗಳು ಮತ್ತು ಪರಿಪೂರ್ಣತೆಯನ್ನು ಹಾಗೂ ಸಮಗ್ರತೆಯನ್ನು ಬಿಂಬಿಸುವ ವಿಶೇಷಣಗಳು ಕೇವಲ ಅಲ್ಲಾಹನಿಗೆ ಮಾತ್ರವೇ ಸೇರಿದ್ದಾಗಿವೆಯೆಂದು ವಿಶ್ವಾಸವಿಡಬೇಕು.


ಈ ಮೇಲಿನ ಎಲ್ಲಾ ವಿಶ್ವಾಸಗಳಲ್ಲೂ ಅಲ್ಲಾಹನು ಏಕೈಕನಾಗಿದ್ದಾನೆಂದು (ವಹ್ದಾನಿಯ್ಯತ್) ವಿಶ್ವಾಸವಿಡಬೇಕು. ಅರ್ಥಾತ್ ಅವನಿಗೆ ತನ್ನ ಪ್ರಭುತ್ವದಲ್ಲಾಗಲಿ, ಆರಾಧನಾರ್ಹತೆಯಲ್ಲಾಗಲಿ ಅಥವಾ ನಾಮ ವಿಶೇಷಣಗಳಲ್ಲಾಗಲಿ ಯಾವನೇ ಅಥವಾ ಯಾವುದೇ ಸಹಭಾಗಿಗಳು ಅಥವಾ ಸರಿಸಮಾನರು ಇಲ್ಲವೆಂದು ವಿಶ್ವಾಸವಿಡಬೇಕು.


ಅಲ್ಲಾಹನು ಹೇಳಿದ್ದಾನೆ:


"ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆಯಿರುವ ಎಲ್ಲದರ ಪ್ರಭು. ಆದ್ದರಿಂದ ಅವನನ್ನು (ಮಾತ್ರ) ಆರಾಧಿಸು ಮತ್ತು ಅವನ ಆರಾಧನೆಯಲ್ಲಿ ಅಚಲವಾಗಿರು ಮತ್ತು ಸಹನೆಯಿಂದಿರು. ಅವನಿಗೆ ಸರಿಸಮಾನರಾಗಿರುವ ಯಾರನ್ನಾದರೂ ನೀನು ತಿಳಿದಿರುವೆಯಾ?" (19:65)


ಈ ಕೆಳಗಿನ ಕುರ್‌ಆನ್ ವಚನಗಳಲ್ಲಿ ಹೇಳಿದಂತೆ ನಾವು ಅಲ್ಲಾಹನ ಕುರಿತು ವಿಶ್ವಾಸವಿಡಬೇಕು.
"ಅಲ್ಲಾಹ್, ಅವನ ಹೊರತು ಆರಾಧನೆಗೆ ಅರ್ಹನಾಗಿರುವವನು ಯಾರೂ ಇಲ್ಲ. ಅವನು ಎಂದೆಂದಿಗೂ ಜೀವಿಸಿರುವವನೂ, ಸರ್ವ ಸೃಷ್ಟಿಗಳನ್ನೂ ಸದಾ ಪರಿಪಾಲಿಸುತ್ತಿರುವವನೂ ಆಗಿದ್ದಾನೆ. ತೂಕಡಿಕೆಯಾಗಲಿ, ನಿದ್ದೆಯಾಗಲಿ ಅವನನ್ನು ಬಾಧಿಸದು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದಾಗಿವೆ. ಅವನ ಅಪ್ಪಣೆಯ ಹೊರತು ಅವನ ಬಳಿ ಶಿಫಾರಸ್ಸು ಮಾಡಬಲ್ಲವನು ಯಾರಿದ್ದಾನೆ? ಅವರಿಗೆ (ತನ್ನ ಸೃಷ್ಟಿಗಳಿಗೆ) ಇಹಲೋಕದಲ್ಲಿ ಏನಾಗುವುದು ಮತ್ತು ಅವರಿಗೆ ಪರಲೋಕದಲ್ಲಿ ಏನಾಗಲಿದೆಯೆಂಬುದನ್ನು ಅವನು ಅರಿತಿದ್ದಾನೆ. ಅವನು ತಾನಿಚ್ಚಿಸಿದವುಗಳ ಹೊರತು ಅವನ ಜ್ಞಾನದಿಂದ ಏನನ್ನಾದರೂ ಆವರಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಾರದು. ಅವನ ಕುರ್ಸೀ (ಪಾದಪೀಠ) ಆಕಾಶಗಳ ಮತ್ತು ಭೂಮಿಯಷ್ಟು ವಿಶಾಲವಾಗಿದೆ. ಅವುಗಳ (ಆಕಾಶಗಳ ಮತ್ತು ಭೂಮಿಯ) ಸಂರಕ್ಷಣೆಯು ಅವನನ್ನು ದಣಿಸಲಾರವು. ಅವನು ಅತ್ಯುನ್ನತನೂ ಮಹೋನ್ನತನೂ ಆಗಿದ್ದಾನೆ." (2:255) ಎಂದು ನಾವು ವಿಶ್ವಾಸವಿಡಬೇಕು. ಅದೇ ರೀತಿ:


"ಅವನಾಗಿದ್ದಾನೆ ಅಲ್ಲಾಹನು. ಅವನ ಹೊರತು ಆರಾಧಿಸಲರ್ಹನಾದವನು ಯಾರೂ ಇಲ್ಲ. ಅಗೋಚರ ಮತ್ತು ಗೋಚರವಾಗಿರುವವು ಗಳನ್ನು ಅರಿತುಕೊಂಡಿರುವವನು. ಅವನು ಪರಮ ದಯಾಮಯನು ಮತ್ತು ಕರುಣಾಮಯಿ ಯಾಗಿದ್ದಾನೆ. ಅವನಾಗಿದ್ದಾನೆ ಅಲ್ಲಾಹನು. ಅವನ ಹೊರತು ಆರಾಧಿಸಲರ್ಹನಾದವನು ಯಾರೂ ಇಲ್ಲ. ಅವನು ಸಾಮ್ರಾಟನು, ಪವಿತ್ರನು, ಸರ್ವ ನ್ಯೂನತೆಗಳಿಂದಲೂ ಮುಕ್ತನಾದವನು, ನಿರ್ಭಯತೆಯನ್ನು ನೀಡುವವನು, ತನ್ನ ಸೃಷ್ಟಿಗಳ ಮೇಲ್ನೋಟವಹಿಸುವವನು, ಪ್ರತಾಪವಿರು ವವನು, ನಿರ್ಬಂಧಿಸುವವನು ಮತ್ತು ಪರಮಶ್ರೇಷ್ಠನು. ಅವರು ಸಹಭಾಗಿಗಳನ್ನು ಕಲ್ಪಿಸುವುದಕ್ಕಿಂತಲೂ ಅಲ್ಲಾಹನು ಅದೆಷ್ಟೋ ಪರಿಪಾವನನಾಗಿದ್ದಾನೆ. ಅವನಾಗಿದ್ದಾನೆ ಅಲ್ಲಾಹನು. ಅವನು ಸೃಷ್ಟಿಕರ್ತನು, ನಿರ್ಮಾತೃನು ಮತ್ತು ರೂಪವನ್ನು ನೀಡುವವನು. ಸುಂದರವಾದ ನಾಮಗಳು ಅವನಿಗೆ ಸೇರಿದ್ದಾಗಿವೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಪರಿಪಾವನತೆಯನ್ನು ಕೊಂಡಾಡುತ್ತಿವೆ. ಅವನು ಪ್ರತಾಪಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ." (59:22-24) ಎಂದು ಕೂಡ ನಾವು ವಿಶ್ವಾಸವಿಡಬೇಕು.


ಆಕಾಶಗಳ ಮತ್ತು ಭೂಮಿಯ ಪರಮಾಧಿಕಾರವು ಅಲ್ಲಾಹನಿಗೆ ಸೇರಿದ್ದಾಗಿದೆ ಯೆಂದು ನಾವು ವಿಶ್ವಾಸವಿಡಬೇಕು. ಅಲ್ಲಾಹನು ಹೇಳಿದ್ದಾನೆ:


"ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನಿಗೆ ಸೇರಿದ್ದಾಗಿದೆ. ತಾನು ಇಚ್ಚಿಸಿದ್ದನ್ನು ಅವನು ಸೃಷ್ಟಿಸುತ್ತಾನೆ. ತಾನಿಚ್ಚಿಸಿದವರಿಗೆ ಅವನು ಹೆಣ್ಣು ಸಂತತಿಯನ್ನು ನೀಡುತ್ತಾನೆ. ಮತ್ತು ತಾನಿಚ್ಚಿಸಿದವರಿಗೆ ಅವನು ಗಂಡು ಸಂತತಿಯನ್ನು ನೀಡುತ್ತಾನೆ. ಅಥವಾ (ತಾನಿಚ್ಚಿಸಿದವರಿಗೆ) ಅವನು ಗಂಡು ಮತ್ತು ಹೆಣ್ಣು ಸಂತತಿಗಳೆರಡನ್ನೂ ನೀಡುತ್ತಾನೆ. ಮತ್ತು ತಾನಿಚ್ಚಿಸಿದವರನ್ನು ಅವನು ಬಂಜೆಯನ್ನಾಗಿ ಮಾಡುತ್ತಾನೆ. ಅವನು ಎಲ್ಲವನ್ನು ಅರಿಯು ವವನೂ ಎಲ್ಲದಕ್ಕೂ ಸಾಮರ್ಥ್ಯವಿರುವವನಾಗಿದ್ದಾನೆ." (42:49,50)


ಅದೇ ರೀತಿ:
"ಅವನಿಗೆ ಸಾದೃಶ್ಯವಾಗಿ ಏನೊಂದೂ ಇಲ್ಲ. ಅವನು ಎಲ್ಲವನ್ನೂ ಆಲಿಸುವವನೂ ಕಾಣುವವನೂ ಆಗಿದ್ದಾನೆ. ಆಕಾಶಗಳ ಮತ್ತು ಭೂಮಿಯ ಕೀಲಿಕೈಗಳು ಅವನಿಗೆ ಸೇರಿದ್ದಾಗಿವೆ. ತಾನಿಚ್ಚಿಸಿದವರಿಗೆ ಅವನು ಅನ್ನಾಧಾರಗಳನ್ನು ವಿಶಾಲಗೊಳಿಸುತ್ತಾನೆ ಮತ್ತು (ತಾನಿಚ್ಚಿಸಿದವರಿಗೆ ಅದನ್ನು) ಇಕ್ಕಟ್ಟುಗೊಳಿಸುತ್ತಾನೆ. ಅವನು ಪ್ರತಿಯೊಂದು ವಸ್ತುವಿನ ಕುರಿತೂ ಅರಿವುಳ್ಳವನಾಗಿದ್ದಾನೆ." (42:11,12) ಎಂದು ನಾವು ವಿಶ್ವಾಸವಿಡಬೇಕು.

ಆದರಣೀಯ ಕುರ್‌ಆನ್ ಅರ್ಥಾನುವಾದ

ವ್ಯಾಖ್ಯಾನಕಾರರು:

ಡಾ| ಮುಹಮ್ಮದ್ ತಕಿಯುದ್ದೀನ್ ಅಲ್‌ಹಿಲಾಲೀ ಮತ್ತು

ಡಾ| ಮುಹಮ್ಮದ್ ಮುಹ್ಸಿನ್ ಖಾನ್

ಕನ್ನಡ ಭಾಷಾಂತರ:

ಮುಹಮ್ಮದ್ ಹಂಝಾ ಪುತ್ತೂರು



ಈ ಕುರ್‌ಆನ್ (ಆಕಾಶಗಳ ಮತ್ತು ಭೂಮಿಯ ಪ್ರಭುವಾದ) ಅಲ್ಲಾಹನ ಹೊರತು ಇತರರಿಂದ ರಚಿಸಲ್ಪಡುವಂತದ್ದಲ್ಲ. ಆದರೆ ಇದು ಇದರ ಮುಂಚೆ (ಅವತೀರ್ಣವಾಗಿ) ಇರುವುದಕ್ಕಿರುವ [ಅರ್ಥಾತ್ ತೌರಾತ್(ತೋರ) ಮತ್ತು ಇಂಜೀಲ್(ಸುವಾರ್ತೆ)] ದೃಢೀಕರಣವಾಗಿದೆ. ಮತ್ತು ಗ್ರಂಥದ (ಅರ್ಥಾತ್ ಮನುಷ್ಯಕುಲಕ್ಕೆ ನಿರ್ದೇಶಿತಗೊಂಡಿರುವ ನಿಯಮಗಳ) ವಿಶದೀಕರಣವಾಗಿದೆ - ಸಂದೇಹವೇ ಇಲ್ಲ - ಇದು ’ಆಲಮೀನ್’ನ (ಮನುಷ್ಯ, ಜಿನ್ನ್ ಮತ್ತು ಅಸ್ತಿತ್ವದಲ್ಲಿರುವ ಪ್ರತಿಯೊಂದರ) ಪ್ರಭುವಿನಿಂದಾಗಿದೆ. (ಆದರಣೀಯ ಕುರ್‌ಆನ್ 10/37)


ಮತ್ತು ಯಾವನು ಇಸ್ಲಾಮ್ ಅಲ್ಲದ ಧರ್ಮವನ್ನು ಅರಸುತ್ತಾನೋ, ಅವನಿಂದ ಅದೆಂದೂ ಸ್ವೀಕರಿಸಲ್ಪಡಲಾರದು ಮತ್ತು ಪರಲೋಕದಲ್ಲಿ ಅವನು ನಷ್ಟಹೊಂದಿದವರಲ್ಲಿ ಸೇರುವನು. (ಆದರಣೀಯ ಕುರ್‌ಆನ್ 3/85)


ಅಬೂ ಹುರೈರಾ(ರ)ರಿಂದ: ಪ್ರವಾದಿ(ಸ)ರವರು ಹೇಳಿದರು: ’ಪ್ರವಾದಿಗಳಲ್ಲಿ ಒಬ್ಬನೇ ಪ್ರವಾದಿಯೂ ಇರಲಿಲ್ಲ, ಪವಾಡಗಳನ್ನು ನೀಡಲ್ಪಡದೆ. ಅದರಿಂದಾಗಿ ಜನರು ವಿಶ್ವಾಸ ತಾಳಿದರು. ಆದರೆ ನನಗೆ ನೀಡಲ್ಪಟ್ಟಿರುವುದು ಅಲ್ಲಾಹನು ನನಗೆ ಅವತೀರ್ಣಗೊಳಿಸಿದ ದೈವಿಕ ಭೋಧನೆಯಾಗಿತ್ತು (ಅರ್ಥಾತ್ ಆದರಣೀಯ ಕುರ್‌ಆನ್). ಆದ್ದರಿಂದ ಅಂತ್ಯದಿನದಂದು ಇತರೆಲ್ಲಾ ಪ್ರವಾದಿಗಳ ಅನುಯಾಯಿಗಳಿಗಿಂತಲೂ ನನ್ನ ಅನುಯಾಯಿಗಳು ಅಧಿಕವಾಗಿರಬೇಕು ಎಂದು ನಾನು ಆಶಿಸುತ್ತೇನೆ.’ (ಬುಖಾರಿ ತನ್ನ ’ಸಹೀಹ್’ನಲ್ಲಿ 4/1905; ಹದೀಸ್ ನಂ. 4696, ಮುಸ್ಲಿಮ್ ತನ್ನ ’ಸಹೀಹ್’ನಲ್ಲಿ 1/134; ಹದೀಸ್ ನಂ. 152)


ಜಾಬಿರ್ ಇಬ್ನ್ ಅಬ್ದಿಲ್ಲಾಹ್(ರ)ರಿಂದ: ಕೆಲವು ಮಲಕ್‌ಗಳು ಪ್ರವಾದಿ(ಸ)ರವರ ಬಳಿಗೆ ಅವರು ಮಲಗಿರುವಾಗ ಬಂದರು. ಅವರಲ್ಲಿ ಕೆಲವರು ಹೇಳಿದರು: ’ಅವರು ಮಲಗಿದ್ದಾರೆ.’ ಇತರರು ಹೇಳಿದರು: ’ಅವರ ಕಣ್ಣುಗಳು ಮಲಗುತ್ತವೆ ಆದರೆ ಅವರ ಹೃದಯವು ಎಚ್ಚರವಾಗಿದೆ.’ ನಂತರ ಅವರು ಹೇಳಿದರು: ’ನಿಮ್ಮ ಈ ಸಂಗಡಿಗನಿಗೆ ಒಂದು ಉದಾಹರಣೆಯಿದೆ.’ ಅವರಲ್ಲೊಬ್ಬನು ಹೇಳಿದನು: ’ಹಾಗಾದರೆ ನಿನ್ನ ಉದಾಹರಣೆಯನ್ನು ಅವರಿಗೆ ಬಿಡಿಸಿಹೇಳು.’ ಅವರಲ್ಲೊಬ್ಬನು ಹೇಳಿದನು: ’ಅವರು ಮಲಗಿದ್ದಾರೆ.’ ಇನ್ನೊಬ್ಬನು ಹೇಳಿದನು: ’ಅವರ ಕಣ್ಣುಗಳು ಮಲಗುತ್ತವೆ ಆದರೆ ಅವರ ಹೃದಯವು ಎಚ್ಚರವಾಗಿದೆ.’ ನಂತರ ಅವರು ಹೇಳಿದರು: ’ಅವರ ಉದಾಹರಣೆಯು ಹೇಗಿದೆಯೆಂದರೆ ಓರ್ವ ಮನುಷ್ಯನು ಒಂದು ಮನೆಯನ್ನು ನಿರ್ಮಿಸಿದನು ಮತ್ತು ಒಂದು ಔತಣವನ್ನು ಮಾಡಿ ಜನರನ್ನು ಆಹ್ವಾನಿಸುವುದಕ್ಕಾಗಿ ಓರ್ವ ಆಹ್ವಾನಕಾರನನ್ನು ಕಳುಹಿಸಿದನು. ಆದ್ದರಿಂದ ಯಾರೆಲ್ಲಾ ಆ ಆಹ್ವಾನಕಾರನ ಆಹ್ವಾನವನ್ನು ಸ್ವೀಕರಿಸಿದರೋ ಅವರು ಆ ಮನೆಯನ್ನು ಪ್ರವೇಶಿಸಿ ಆ ಔತಣವನ್ನು ಸವಿದರು. ಮತ್ತು ಯಾರೆಲ್ಲಾ ಆ ಆಹ್ವಾನಕಾರನ ಆಹ್ವಾನವನ್ನು ಸ್ವೀಕರಿಸಲಿಲ್ಲವೋ ಅವರು ಆ ಮನೆಯನ್ನು ಪ್ರವೇಶಿಸಲಿಲ್ಲ ಮತ್ತು ಆ ಔತಣವನ್ನು ಸವಿಯಲಿಲ್ಲ.’ ನಂತರ ಮಲಕ್‌ಗಳು ಹೇಳಿದರು: ’ಈ ಉದಾಹರಣೆಯನ್ನು ಅವರಿಗೆ (ಪ್ರವಾದಿಯವರಿಗೆ) ವ್ಯಾಖ್ಯಾನಿಸಿಕೊಡು, ಅವರದನ್ನು ತಿಳಿದುಕೊಳ್ಳಲಿ.’ ಅವರಲ್ಲೊಬ್ಬನು ಹೇಳಿದನು: ’ಅವರು ಮಲಗಿದ್ದಾರೆ.’ ಇತರರು ಹೇಳಿದರು: ’ಅವರ ಕಣ್ಣುಗಳು ಮಲಗುತ್ತವೆ ಆದರೆ ಅವರ ಹೃದಯವು ಎಚ್ಚರವಾಗಿದೆ.’ ನಂತರ ಅವರು ಹೇಳಿದರು: ’ಆ ಮನೆಯು ಸ್ವರ್ಗವಾಗಿದೆ ಮತ್ತು ಆ ಆಹ್ವಾನಕಾರನು ಮುಹಮ್ಮದ್(ಸ)ರವರಾ ಗಿದ್ದಾರೆ. ಯಾವನು ಮುಹಮ್ಮದ್(ಸ)ರವರನ್ನು ಅನುಸರಿಸುತ್ತಾನೋ ಅವನು ಅಲ್ಲಾಹನನ್ನು ಅನುಸರಿಸುತ್ತಾನೆ ಮತ್ತು ಯಾವನು ಮುಹಮ್ಮದ್(ಸ)ರವರನ್ನು ಧಿಕ್ಕರಿಸುತ್ತಾನೋ ಅವನು ಅಲ್ಲಾಹನನ್ನು ಧಿಕ್ಕರಿಸುತ್ತಾನೆ. ಮುಹಮ್ಮದ್(ಸ)ರವರು ಜನರನ್ನು ವಿಭಾಗಿಸಿದ್ದಾರೆ (ಅರ್ಥಾತ್ ತನ್ನ ಸಂದೇಶದ ಮೂಲಕ ಒಳಿತನ್ನು ಕೆಡುಕಿನಿಂದ ಮತ್ತು ವಿಶ್ವಾಸಿಗಳನ್ನು ಅವಿಶ್ವಾಸಿಗಳಿಂದ ವಿಭಾಗಿಸಿದ್ದಾರೆ).’ (ಬುಖಾರಿ ತನ್ನ ’ಸಹೀಹ್’ನಲ್ಲಿ 6/2655; ಹದೀಸ್ ನಂ. 6852)


ಅಬೂ ಹುರೈರಾ(ರ)ರಿಂದ: ಅಲ್ಲಾಹನ ಸಂದೇಶವಾಹಕ(ರ)ರವರು ಹೇಳಿದರು: ’ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ನಾನು ಇತರೆಲ್ಲಾ ಜನರಿಗಿಂತಲೂ ಮರ್ಯಮ್ (ಮೇರಿ)ರವರ ಮಗನಾದ ಈಸಾ(ಯೇಸು)ರವರಿಗೆ ಹೆಚ್ಚು ಹತ್ತಿರವಾಗಿದ್ದೇನೆ. ಪ್ರವಾದಿಗಳೆಲ್ಲರೂ ಪಿತೃಸಹೋದರರಾಗಿದ್ದಾರೆ, ಅವರ ತಾಯಂದಿರು ವ್ಯತ್ಯಸ್ತರಾಗಿದ್ದಾರೆ, ಆದರೆ ಅವರೆಲ್ಲರ ಧರ್ಮವು ಒಂದೇ ಆಗಿದೆ (ಅರ್ಥಾತ್ ಇಸ್ಲಾಮೀ ಏಕದೇವಾರಾಧನೆ).’ (ಬುಖಾರಿ ತನ್ನ ’ಸಹೀಹ್’ನಲ್ಲಿ 3/1270; ಹದೀಸ್ ನಂ. 3259, ಮುಸ್ಲಿಮ್ ತನ್ನ ’ಸಹೀಹ್’ನಲ್ಲಿ 4/1837; ಹದೀಸ್ ನಂ. 2365)


ಅಬೂ ಹುರೈರಾ(ರ)ರಿಂದ: ಅಲ್ಲಾಹನ ಸಂದೇಶವಾಹಕ(ರ)ರವರು ಹೇಳಿದರು: ’ಮುಹಮ್ಮದ್‌ನ ಆತ್ಮವು ಯಾರ ಕೈಯ್ಯಲ್ಲಿದೆಯೋ ಅವನ ಮೇಲಾಣೆ. ಈ (ಮನುಷ್ಯ) ಸಮುದಾಯದಲ್ಲಿ ಯಹೂದಿಯಾಗಲಿ, ಕ್ರೈಸ್ತನಾಗಲಿ ಇರಲಾರನು, ಅವನು ನನ್ನ ಬಗ್ಗೆ ಆಲಿಸಿದ ನಂತರವೂ, ಯಾವ ಸಂದೇಶದೊಂದಿಗೆ ನಾನು ನಿಯೋಗಿಸಲ್ಪಟ್ಟೆನೋ ಆ ಸಂದೇಶದ ಮೇಲೆ ವಿಶ್ವಾಸ ತಾಳದೆ ಮೃತಪಡುವುದಾದರೆ, ನರಕವಾಸಿಗಳಲ್ಲಿ ಸೇರಿದವನಾಗಿರುವ ಹೊರತು.’ (ಮುಸ್ಲಿಮ್ ತನ್ನ ’ಸಹೀಹ್’ನಲ್ಲಿ 1/134; ಹದೀಸ್ ನಂ. 153)

ಸೃಷ್ಟಿಯ ಅಧ್ಯಯನದ ಮೂಲಕ ಸೃಷ್ಟಿ ಕರ್ತನೆಡೆಗೆ....

ವಿ ಕೆ ಹಿದಾಯತುಲ್ಲಾಹ್ ವೀರಕಂಭ

ಮನುಷ್ಯನು ಜನ್ಮತಃ ಜಿಜ್ಞಾಸಿಯಾಗಿರುವನು. ತನ್ನ ಹಾಗೂ ತನ್ನ ಸುತ್ತಮುತ್ತಲಿನ ಮಾತ್ರವಲ್ಲ, ಪ್ರಪಂಚದ ಕುರಿತಾದ ಸಂಶೋಧನಾತ್ಮಕ ಅಧ್ಯಯನವನ್ನು ಅವನು ತನ್ನ ಶೈಶವಾವಸ್ಥೆಯಲ್ಲೇ ಪ್ರಾರಂಭಿಸುತ್ತಾನೆ. ತನಗೆ ನೀಡಲಾದ ಆಟಿಕೆಯನ್ನು ಒಡೆದು ಕುತೂಹಲದಿಂದ ಅದರೊಳಗೇನಿದೆ ಎಂಬುದನ್ನರಿಯಲು ಮಕ್ಕಳು ಪಡುವ ಪರಿಶ್ರಮವು ಪ್ರಪಂಚದ ವಾಸ್ತವಿಕತೆಯ ಕುರಿತು ತಿಳಿಯುವ ಮಾನವ ಮನಸ್ಸಿನ ಸಂಶೋಧನಾತ್ಮಕ ಅನ್ವೇಷಣೆಗೊಂದು ಜ್ವಲಂತ ನಿದರ್ಶನವಾಗಿದೆ.

ಆಕಾಶದ ಅನಂತತೆಯ ಕುರಿತು ಮತ್ತು ಸಮುದ್ರದ ಆಳ ಮತ್ತು ಸಂಕೀರ್ಣತೆಗಳ ಕುರಿತು ಅತೀವ ಆಸಕ್ತಿಯಿಂದ ಸಂಶೋಧಿಸುತ್ತಿರುವ ವಿಜ್ಞಾನಿಗಳೂ ಕೂಡ ಈ ಪ್ರಪಂಚದ ವಾಸ್ತವಿಕತೆಯನ್ನು ಅರಿಯುವ ಮಾನವ ಮನಸ್ಸಿನ ಅನ್ವೇಷಣಾ ತ್ವರೆಯ ಕುರಿತು ಒಂದು ಉದಾಹರಣೆ ಮಾತ್ರ.

ಒಂದು ತೆರೆದಿಡಲ್ಪಟ್ಟ ಗ್ರಂಥದಂತಿರುವ ಈ ಮಹಾ ಪ್ರಪಂಚದ ಯಾವುದೇ ಕಡೆಯಲ್ಲಿಯೂ ಪ್ರಪಂಚ ನಿರ್ಮಾತೃನ ಹೆಸರನ್ನು ಬರೆಯಲ್ಪಟ್ಟಿಲ್ಲ. ಆದರೆ ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಯೂ, ಪ್ರತಿಯೊಂದು ವಸ್ತುವೂ ಇದಕ್ಕೆಲ್ಲಾ ಓರ್ವ ನಿರ್ಮಾಪಕನಿರಲೇಬೇಕು ಎಂಬ ಸತ್ಯವನ್ನು ಪ್ರಕಟಿಸುತ್ತದೆ.

ಮಾನವನು ಭೂಮುಖದ ಮೇಲೆ ಜೀವಿಸುತ್ತಿರುವ ಜೀವಿಗಳಲ್ಲಿ ಅತಿಬುದ್ಧಿಶಾಲಿಯಾಗಿರುವನು. ಈ ಬೃಹತ್ ಪ್ರಪಂಚದ ಕುರಿತಾಗಿ ಮಾನವ ಮನಸ್ಸಿನಲ್ಲಿ ಉದ್ಭವಿಸುವ ಹಲವಾರು ಸಹಜ ಪ್ರಶ್ನೆಗಳಿವೆ. ನಿರಕ್ಷರಿ ವ್ಯಕ್ತಿಯಿಂದ ಪ್ರಾರಂಭಗೊಂಡು ಮಹಾನ್ ವಿಜ್ಞಾನಿಯ ತನಕ ಪ್ರತಿಯೊಬ್ಬನ ಮನಸ್ಸಲ್ಲೂ ಈ ಪ್ರಶ್ನೆಗಳು ಮೂಡುತ್ತವೆ. ಮನುಷ್ಯನ ಬುದ್ಧಿಶಕ್ತಿ ಹಾಗೂ ಚಿಂತನಾಶಕ್ತಿಯು ಅವನಲ್ಲಿ ಈ ಪ್ರಶ್ನೆಗಳನ್ನು ಮೂಡಿಸುತ್ತವೆ. ಪ್ರಪಂಚದಲ್ಲಿ ಈ ಹಿಂದೆ ಗತಿಸಿ ಹೋದ ಯಾವುದೇ ನಾಗರಿಕತೆಗಳ ಕುರಿತು ಅನ್ವೇಷಿಸಿದರೂ ಈ ಕಾರ್ಯವು ನಮಗೆ ಸ್ಪಷ್ಟವಾಗುತ್ತದೆ.

ಈ ಬೃಹತ್ ಪ್ರಪಂಚವನ್ನು ಸೃಷ್ಟಿಸಿ, ಸಂವಿಧಾನಿಸಿ, ಇದನ್ನು ಮುನ್ನಡೆಸುತ್ತಿರುವವನಾರು ಎಂಬುದು ಮಾನವ ಮನಸ್ಸಿನಲ್ಲಿ ಮೂಡಿಬರುವ ಪ್ರಥಮ ಹಾಗೂ ಪ್ರಮುಖ ಪ್ರಶ್ನೆಯೇ ಆಗಿದೆ. ಆದರೆ ಪರ್ವತಗಳ ಅಸ್ತಿತ್ವ, ಭೂಮ್ಯಾಕಾಶಗಳ ಸೃಷ್ಟಿ, ಅವುಗಳ ಕುರಿತಾದ ಅಧ್ಯಯನವು ಈ ಪ್ರಪಂಚಕ್ಕೆ ಓರ್ವ ಸೃಷ್ಟಿಕರ್ತನಿದ್ದಾನೆ ಎಂಬುದನ್ನು ಸಂಶಯಕ್ಕೆಡೆಯಿಲ್ಲದ ರೀತಿಯಲ್ಲಿ ಸಾಬೀತುಪಡಿಸುತ್ತದೆ.

ನಾವು ನಮ್ಮ ಕುರಿತೇ ಚಿಂತಿಸೋಣ.

ತಂದೆಯು ಸೃವಿಸುವ ಕೋಟ್ಯಾನುಕೋಟಿ ವೀರ್ಯಾಣುಗಳಲ್ಲಿ ಒಂದು ವೀರ್ಯಾಣು ಮಾತ್ರ ತಾಯಿಯ ಗರ್ಭಾಶಯದಲ್ಲಿ ಅಂಡಾಣುವಿನೊಂದಿಗೆ ಸಂಯೋಜನೆ ಗೊಳ್ಳುತದೆ. ತನ್ಮೂಲಕ ಮಾನವ ಸೃಷ್ಟಿಕ್ರಿಯೆ ಆರಂಭಗೊಳ್ಳುತ್ತದೆ. ಚಿಂತನಾಶೀಲನಾಗಿರುವ, ಬುದ್ಧಿಶಕ್ತಿಯಿರುವ ಯಾವನೇ ಓರ್ವ ವ್ಯಕ್ತಿಗೆ ಈ ವೀರ್ಯಾಣು ಅಂಡಾಣುಗಳೆಲ್ಲವೂ ತನ್ನಿಂತಾನೇ ಸ್ವಯಂ ಉಂಟಾಯಿತೆಂದು ಹೇಳಲು ಸಾಧ್ಯವಾದೀತೇ? ಅಥವಾ ಇವೆಲ್ಲವನ್ನೂ ಸೃಷ್ಟಿಸಿದವನು ನಾನೇ ಎಂದು ಘೋಷಿಸಿಕೊಳ್ಳಲು ಯಾವನೇ ವ್ಯಕ್ತಿಗಾದರೂ ಸಾಧ್ಯವಿದೆಯೇ?

ಅಲ್ಲಾಹನು ಮಾನವನ ಬುದ್ಧಿಯೊಂದಿಗೆ ಪ್ರಶ್ನಿಸುತ್ತಾನೆ:

“ನೀವು ಸೃವಿಸುತ್ತಿರುವುದನ್ನು (ವೀರ್ಯವನ್ನು) ನೀವು ನೋಡುವುದಿಲ್ಲವೇ? ನೀವಾಗಿರುವಿರೋ ಅದನ್ನು ಸೃಷ್ಟಿಸುತ್ತಿರುವವರು ಅಥವಾ ನಾವಾಗಿರುವೆವೋ (ಅದರ) ಸೃಷ್ಟಿಕರ್ತರು?” (ಆದರಣೀಯ ಕುರ್‌ಆನ್ ೫೬:೫೮,೫೯)

“ಖಂಡಿತಾಗಿಯೂ ನಾವು ಮಾನವನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು. ನಂತರ ನಾವು ಅವನನ್ನು ‘ನುತ್ಫ’ (ಸ್ತ್ರೀಪುರುಷರ ಮಿಶ್ರಿತ ವೀರ್ಯ)ವನ್ನಾಗಿ ಮಾಡಿ ಒಂದು ಸುರಕ್ಷಿತವಾದ ಸ್ಥಳದಲ್ಲಿ (ಗರ್ಭಾಶಯದಲ್ಲಿ) ನೆಲೆಗೊಳಿಸಿದೆವು. ಬಳಿಕ ನಾವು ‘ನುತ್ಫ’ವನ್ನು ಹೆಪ್ಪುಗಟ್ಟಿದ ರಕ್ತಪಿಂಡವನ್ನಾಗಿ ಮಾಡಿದೆವು. ತದನಂತರ ಆ ಹೆಪ್ಪುಗಟ್ಟಿದ ರಕ್ತಪಿಂಡವನ್ನು ಮಾಂಸಖಂಡವನ್ನಾಗಿ ಮಾಡಿದೆವು. ಆಮೇಲೆ ಮಾಂಸಖಂಡವನ್ನು ಮೂಳೆಗಳನ್ನಾಗಿ ಮಾಡಿದೆವು. ತದನಂತರ ಮೂಳೆಗಳನ್ನು ಮಾಂಸಗಳಿಂದ ಹೊದಿಸಿದೆವು. ಆ ಬಳಿಕ ನಾವು ಅದನ್ನು ಬೇರೆಯೇ ಸೃಷ್ಟಿಯನ್ನಾಗಿ ಹೊರತಂದೆವು. ಆದ್ದರಿಂದ ಸೃಷ್ಟಿಸುವವರಲ್ಲಿ ಅತ್ಯುತ್ತಮನಾದ ಅಲ್ಲಾಹನು ಅನುಗ್ರಹೀತನಾಗಿದ್ದಾನೆ.” (ಆದರಣೀಯ ಕುರ್‌ಆನ್ ೨೩:೧೨-೧೪)

ಕುರ್‌ಆನ್ ಅದೆಷ್ಟು ಸರಳ ಹಾಗೂ ವೈಜ್ಞಾನಿಕವಾಗಿ ಮನುಷ್ಯ ಸೃಷ್ಟಿಯ ಕುರಿತು ವಿವರಿಸುತ್ತದೆ! ಅಧ್ಯಯನಾಶೀಲನಾದ ಮನುಷ್ಯನ ಚಿಂತನಾಶಕ್ತಿಯನ್ನು ಬಡಿದೆಬ್ಬಿಸುವ ರೀತಿಯಲ್ಲಿ ಕುರ್‌ಆನ್ ಅವನ ಸೃಷ್ಟಿಕ್ರಿಯೆಯ ಕುರಿತು ವಿವರಿಸಿಕೊಡುತ್ತದೆ. ಮಾನವನಿಗೆ ಓರ್ವ ಸೃಷ್ಟಿಕರ್ತನಿರುವನೆಂದು ಮಾತ್ರವಲ್ಲ ಅವನು ಯಾರೆಂದು ಕೂಡ ಕುರ್‌ಆನ್ ಅತ್ಯಂತ ಸಮರ್ಪಕವಾಗಿ ಮನುಷ್ಯನ ಮುಂದೆ ತೆರೆದಿಡುತ್ತದೆ!

ಇನ್ನು ನಮ್ಮ ಪರಿಸರದೆಡೆಗೆ ಒಮ್ಮೆ ಕಣ್ಣೋಡಿಸೋಣ!

ವ್ಯತ್ಯಸ್ತ ಬಣ್ಣ ಮತ್ತು ರುಚಿಗಳುಳ್ಳ ಫಲಗಳನ್ನು ನೀಡುವ ಸಸ್ಯವೃಕ್ಷಲತಾದಿಗಳೆಡೆಗೆ ಒಮ್ಮೆ ನೋಡಿರಿ. ಅವುಗಳ ಕುರಿತೊಮ್ಮೆ ಚಿಂತಿಸಿರಿ. ಅವುಗಳಿಲ್ಲದಿರುತ್ತಿದ್ದರೆ ಮನುಷ್ಯನ ಬದುಕು ಅದೆಷ್ಟು ದುಸ್ತರವಾಗುತ್ತಿತ್ತು ಎಂಬುದನ್ನು ಆಲೋಚಿಸಿರಿ! ಇವುಗಳನ್ನೆಲ್ಲಾ ಸೃಷ್ಟಿಸಿದವನಾರು? ಯಾವನೇ ವ್ಯಕ್ತಿಗೂ ನಾನೆಂದು ಘೋಷಿಸಿಕೊಳ್ಳುವ ಧೈರ್ಯವಿದೆಯೇ?

“ಆಕಾಶದಿಂದ ಮಳೆನೀರನ್ನು ಸುರಿಸಿದವನು ಅವನಾಗಿದ್ದಾನೆ. ಅದರಿಂದ ನೀವು ಕುಡಿಯುತ್ತೀರಿ ಮತ್ತು ಅದರಿಂದ ಉಂಟಾದ ಹುಲ್ಲನ್ನು ನಿಮ್ಮ ಜಾನುವಾರುಗಳಿಗೆ ಮೇಯಿಸುತ್ತೀರಿ. ಅದರ (ನೀರಿನ) ಮೂಲಕ ಅವನು ನಿಮಗೆ ಬೆಳೆಗಳನ್ನು, ಇಪ್ಪೆ, ಖರ್ಜೂರ, ದ್ರಾಕ್ಷೆ ಮತ್ತು ನಾನಾ ತರದ ಫಲಗಳನ್ನು ಉತ್ಪಾದಿಸಿ ಕೊಡುತ್ತಾನೆ. ಖಂಡಿತವಾಗಿಯೂ ಚಿಂತಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.” (ಆದರಣೀಯ ಕುರ್‌ಆನ್ ೧೬:೧೦, ೧೧)

ಇನ್ನು ಸಮುದ್ರದೆಡೆಗೆ ನೋಡಿರಿ. ಸಮುದ್ರದಲ್ಲಿ ಜೀವಿಸುವ ಜಲಚರಗಳು, ಆಕಾಶದಲ್ಲಿ ಹಾರಾಡುವ ಹಕ್ಕಿಗಳು, ಕಾಡುಮೃಗಗಳು, ಸಾಕುಪ್ರಾಣಿಗಳು, ಅವುಗಳಿಗೆ ನೀಡಲ್ಪಟ್ಟ ವ್ಯತ್ಯಸ್ತ ಶಕ್ತಿಗಳು, ಅವುಗಳನ್ನು ಸಂವಿಧಾನಿಸಲ್ಪಟ್ಟ ವಿಭಿನ್ನ ರೀತಿಗಳು ಎಲ್ಲವೂ ಅತ್ಯದ್ಭುತಗಳಲ್ಲವೇ?

ಪಕ್ಷಿಗಳ ಹಾರಾಟದ ಬಗ್ಗೆ ಕುರ್‌ಆನ್ ಹೇಳುತ್ತದೆ:

“ಆಕಾಶದ ಮಧ್ಯದಲ್ಲಿ ನಿಯಂತ್ರಿತವಾಗಿ (ಹಾರಾಡುವ) ಪಕ್ಷಿಗಳನ್ನು ಅವರು ನೋಡುವುದಿಲ್ಲವೇ? ಅಲ್ಲಾಹನ ಹೊರತು ಅವುಗಳನ್ನು ಏನೊಂದೂ ಹಿಡಿದುಕೊಳ್ಳುತ್ತಿಲ್ಲ. ನಿಶ್ಚಯವಾಗಿಯೂ ವಿಶ್ವಾಸಿವಿಡುವ ಜನರಿಗೆ ಅದರಲ್ಲಿ ನಿದರ್ಶನಗಳಿವೆ.” (ಆದರಣೀಯ ಕುರ್‌ಆನ್ ೧೬/೭೯)

“ತಮ್ಮ ಮೇಲ್ಭಾಗದಲ್ಲಿ ರೆಕ್ಕೆಗಳನ್ನು ಬಿಚ್ಚಿಕೊಳ್ಳುತ್ತಾ ಮತ್ತು ಮಡಚಿಕೊಳ್ಳುತ್ತಾ (ಹಾರಾಡುತ್ತಿರುವ) ಹಕ್ಕಿಗಳನ್ನು ಅವರು ನೋಡುವುದಿಲ್ಲವೇ? ಪರಮ ದಯಾಮಯನ (ಅಲ್ಲಾಹನ) ಹೊರತು ಅವುಗಳನ್ನು ಏನೊಂದೂ ಹಿಡಿದುಕೊಳ್ಳುತ್ತಿಲ್ಲ. ಖಂಡಿತವಾಗಿಯೂ ಅವನು ಪ್ರತಿಯೊಂದು ವಸ್ತುವನ್ನೂ ಸೂಕ್ಷ್ಮವಾಗಿ ವೀಕ್ಷಿಸುವವನಾಗಿದ್ದಾನೆ.” (ಆದರಣೀಯ ಕುರ್‌ಆನ್ ೬೭/೧೯)

ಭೂಮ್ಯಾಕಾಶ, ಸೂರ್ಯ, ಚಂದ್ರ, ನಕ್ಷತ್ರಾದಿಗಳ ಕುರಿತು, ಹಗಲು ರಾತ್ರಿಗಳ ಕುರಿತು ಮಾತ್ರವಲ್ಲ, ತನ್ನ ಶರೀರದ ಕುರಿತು ಚಿಂತಿಸಿ ಈ ಪ್ರಪಂಚದ ಸೃಷ್ಟಿಕರ್ತನನ್ನು ಅರಿಯಲು ಕುರ್‌ಆನ್ ಕರೆ ನೀಡುತ್ತದೆ. ಮನುಷ್ಯ ಚಿತ್ತಕ್ಕೆ ಸವಾಲೆಸೆದು ಅವನ ಚಿಂತನಾಶಕ್ತಿಯನ್ನು ಬಡಿದೆಬ್ಬಿಸಿ ಸೃಷ್ಟಿಕರ್ತನ ಬಗ್ಗೆ ತಿಳಿಯಲು ಕುರ್‌ಆನ್ ಪದೇ ಪದೇ ಸಾರುತ್ತದೆ.

ಕುರ್‌ಆನ್ ಹೇಳುವುದನ್ನು ನೋಡಿರಿ:

“ಅವರು ಒಂಟೆಯ ಕಡೆಗೆ ನೋಡುವುದಿಲ್ಲವೇ, ಅದು ಹೇಗೆ ಸೃಷ್ಟಿಸಲ್ಪಟ್ಟಿದೆಯೆಂದು? ಆಕಾಶದೆಡೆಗೆ, ಅದು ಹೇಗೆ ಎತ್ತರಿಸಲ್ಪಟ್ಟಿದೆಯೆಂದು? ಪರ್ವತದೆಡೆಗೆ, ಅದು ಹೇಗೆ (ಭದ್ರವಾಗಿ) ನಾಟಿನಿಲ್ಲಿಸಲಾಗಿದೆಯೆಂದು? ಮತ್ತು ಭೂಮಿಯೆಡೆಗೆ, ಅದು ಹೇಗೆ ಹರಡಿಸಲಾಗಿದೆಯೆಂದು?” (ಆದರಣೀಯ ಕುರ್‌ಆನ್ ೮೮/೧೭-೨೦)

“ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿಯಲ್ಲಿ, ರಾತ್ರಿ ಮತ್ತು ಹಗಲು ಅನುಕ್ರಮವಾಗಿ ಬದಲಾಗುವುದರಲ್ಲಿ ಬುದ್ಧಿವಂತರಿಗೆ ದೃಷ್ಟಾಂತಗಳಿವೆ.” (ಆದರಣೀಯ ಕುರ್‌ಆನ್ ೩/೧೯೦)

“ಅವನೇ ಆಗಿರುವನು ರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರರನ್ನು ಸೃಷ್ಟಿಸಿದವನು. ಪ್ರತಿಯೊಂದೂ (ಅದಕ್ಕೆ ನಿಶ್ಚಯಿಸಲಾದ) ಪಥಗಳಲ್ಲಿ ಚಲಿಸುತ್ತಿವೆ.” (ಆದರಣೀಯ ಕುರ್‌ಆನ್ ೨೧/೩೩)

ಸರ್ವ ರೀತಿಯ ಅಧ್ಯಯನ ಮತ್ತು ಚಿಂತನೆಗಳ ಮೂಲಕ ಸೃಷ್ಟಿಕರ್ತನ ಕುರಿತು ಅರಿತುಕೊಳ್ಳಲು ಕರೆ ನೀಡುವ ಕುರ್‌ಆನ್ ಅವನನ್ನು ಮಾತ್ರವೇ ಆರಾಧಿಸಬೇಕೆಂದು ಕರೆ ನೀಡುತ್ತದೆ.

“ಓ ಜನರೇ, ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನೇ ನೀವು ಆರಾಧಿಸಿರಿ. ನೀವು ಭಯಭಕ್ತಿಯುಳ್ಳವರಾಗಲೂ ಬಹುದು. ಅವನು ಭೂಮಿಯನ್ನು ನಿಮಗೊಂದು ಹಾಸನ್ನಾಗಿಯೂ, ಮುಗಿಲನ್ನು ಮೇಲ್ಛಾವಣಿಯನ್ನಾಗಿಯೂ ಮಾಡಿ, ಆಕಾಶ ದಿಂದ ನಿಮಗೋಸ್ಕರ ಮಳೆನೀರನ್ನು ಸುರಿಸಿ, ತನ್ಮೂಲಕ ವಿವಿಧ ರೀತಿಯ ಫಲಗಳನ್ನು ನಿಮಗೋಸ್ಕರ ಹೊರತಂದವನಾಗಿರುವನು. ಆದ್ದರಿಂದ ಇವೆಲ್ಲವನ್ನೂ ತಿಳಿದವರಾಗಿದ್ದೂ ಕೂಡ ನೀವು ಅಲ್ಲಾಹನೊಂದಿಗೆ ಇತರರನ್ನು ಸರಿಸಮಾನರನ್ನಾಗಿ ಮಾಡಬೇಡಿ.” (ಆದರಣೀಯ ಕುರ್‌ಆನ್ ೨/೨೧,೨೨)

ನಮಗೆ ಸಾಧ್ಯವಿರುವ ಎಲ್ಲಾ ಮಾಧ್ಯಮಗಳ ಮೂಲಕ ಅಧ್ಯಯನ ನಡೆಸೋಣ. ನಮ್ಮ ಚಿಂತನಾಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳೋಣ. ನಮ್ಮ ಬುದ್ಧಿಯನ್ನು ಪೂರ್ವಿಕರ ಅಂಧಾನುಕರಣೆಗೆ ಬಲಿ ನೀಡದೆ, ಯಾವುದೇ ವ್ಯಕ್ತಿ, ಶಕ್ತಿಗಳ ಮುಂದೆ ಒತ್ತೆಯಿಡದೆ ನಿಷ್ಪಕ್ಷಪಾತವಾಗಿ ಚಿಂತಿಸೋಣ. ಅವನನ್ನು ಮಾತ್ರ ಆರಾಧಿಸುವುದರ ಮೂಲಕ ಭಯಭಕ್ತಿಯುಳ್ಳವರಾಗಿ ಅವನೆಡೆಗೆ ಮರಳೋಣ.